Sunday, January 3, 2016

ಪರಿಚಯ : ಸತ್ಯನಾರಾಯಣ ಮುಜುಮದಾರ (ಬರೆಧವರು :- ವಿ.ಎಸ್. ಕಾಂತನವರ್ ಸಾಹಿತಿಗಳು)


PC:- Raghutilak Mujumdar

          ಇವರು ಬಾಗಲಕೋಟೆ ಜಿಲ್ಲೆ ಇಳಕಲ್ಲಿನಲ್ಲಿ ಜನಿಸಿದರು. ಇವರು ಗುಡುಗುಂಟಿಯ ಶ್ರೀ ತಿರುಮಲರಾವ್ ಮುಜುಮದಾರ್ ಮತ್ತು ಶ್ರೀಮತಿ ಸುಂದರಾಬಾಯಿ ದಂಪತಿಗಳ ಪುತ್ರ. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ರಾಯಚೂರು ಜಿಲ್ಲಾ ಲಿಂಗಸೂಗೂರು ತಾಲೂಕು ಗುಡಗುಂಟಿ ಸರಕಾರಿ ಶಾಲೆಯಲ್ಲಾಯಿತು. ಪ್ರೌಢ ವಿದ್ಯಾಭ್ಯಾಸ ಟಿ.ಡಿ.ಬಿ. ಹೈಸ್ಕೂಲಿನಲ್ಲಾಯಿತು. 1966 ರಲ್ಲಿ ಇವರದೇ ಮೊದಲ ತಂಡ. ಇಳಕಲ್ಲಿನಲ್ಲಿ ಕಾಲೇಜು ವಿದ್ಯಾಭ್ಯಾಸ. ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 1970ರಲ್ಲಿ ಬಿ.ಎಸ್ಸಿ. ಪದವಿಗಳಿಸಿದರು. ಇವರ ಅಜ್ಜ- ಅಜ್ಜಿಯೇ ಶಿಕ್ಷಣ ಪಡೆಯಲು ಕಾರಣವಾದರು. ಕಡು ಬಡತನ. ಆದರೆ ಇವರಿಗೆ ವಿದ್ಯಾರ್ಜನೆಯ ದಾಹ, ಅಂತೂ ಹೇಗೋ ಅದೇ ತಾನೆ ಕಲಬುರ್ಗಿಯಲ್ಲಿ ಪ್ರಾರಂಭವಾದ ಸ್ನಾತಕೋತ್ತರ ಕೇಂದ್ರದಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. 1973 ರಲ್ಲಿ ಕೆನರಾ ಬ್ಯಾಂಕಿನಲ್ಲಿ ವೃತ್ತಿಜೀವನ ಆರಂಭ. 1981 ರಲ್ಲಿ ಅಧಿಕಾರಿಯಾಗಿ ಬಡ್ತಿ. 1996 ರಲ್ಲಿ ಪ್ರಬಂಧಕರಾಗಿ 2004 ರಲ್ಲಿ ಮುಖ್ಯಪ್ರಬಂಧಕರಾಗಿ 2010 ರಲ್ಲಿ ನಿವೃತ್ತರಾದರು. ಅಧಿಕಾರಾವಧಿಯಲ್ಲಿ ಹೊಸದುರ್ಗ, ಕಲಬುರ್ಗಿ, ಕೊಪ್ಪಳ, ಮಾಸೂರು ಪನಿವಾಲಾಮೋಟ ಇತ್ಯಾದಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರವೃತ್ತಿಯಿಂದ ಸಾಹಿತಿಗಳು. ಆದರೆ ಕವಿ ಮನೋಧರ್ಮದ ಇವರು ಹೆಚ್ಚಾಗಿ ಕವಿತೆಗಳನ್ನೇ ರಚಿಸಿದ್ದಾರೆ. 1999 ರಲ್ಲಿ ಇವರ ಪ್ರಥಮ ಕವನ ಸಂಕಲನ ಪ್ರಕಟವಾಯಿತು. ನಂತರ ಇವರ 23ಕ್ಕೂ ಹೆಚ್ಚು ಕವನಸಂಕಲನಗಳು ಪ್ರಕಟವಾಗಿವೆ. ‘ಬಿಚ್ಚು ಹೂಗಳು’2009-12 ನೇ ಸಾಲಿನ ಸೊಲ್ಲಾಪುರ ವಿಶ್ವವಿದ್ಯಾಲಯ ಬಿ.ಕಾಂ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿದೆ. ಇವರು 4
ಸಂಶೋಧನಾ ಕೃತಿ ಗಳು ಒಂದು ನಾಟಕ ಹಾಗೂ 6 ಗ್ರಂಥಗಳ ಸಂಪಾದಕರಾಗಿದ್ದಾರೆ. ಹೊಸದುರ್ಗದಲ್ಲಿದ್ದಾಗ ಶ್ರೀ ಶ್ರೀಕಂಠಯ್ಯ ಇವರಿಂದ ಸನಾತನ ಧರ್ಮದ ಪರಿಚಯವಾಯಿತು. ಕಲ್ಬುರ್ಗಿಯಲ್ಲಿ ಶ್ರೀ ಪಂಡಿತರಾವ್ ಸರಾಫ್ ಇವರಿಂದ ಉಪನಿಷತ್ತಿನ ಪರಿಚಯ. ಕೊಪ್ಪಳದಲ್ಲಿ ನಾಲ್ಕು ವರ್ಷ ಶ್ರೀ ನಾರಾಯಣಶಾಸ್ತ್ರಿಯವರಲ್ಲಿ ವೇದಾಧ್ಯಯನ ಮಾಡಿದರು. ಬಸವ ಕಲ್ಯಾಣದಲ್ಲಿರುವಾಗ ಕವನ ರಚನೆಗೆ ಪ್ರಾರಂಭಿಸಿದರು. ನಂತರ ಇವರು 4500 ಕ್ಕೂ ಹೆಚ್ಚು ಕವನಗಳನ್ನು ರಚಿಸಿದರು. ದಾವಣಗೆರೆಯಲ್ಲಿರುವಾಗ ಇವರಿಗೆ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಪರಿಚವಾಗಿ ಅವರ ಗ್ರಂಥಗಳನ್ನೆಲ್ಲ ಓದಿದ ಮೇಲೆ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಆಸಕ್ತಿವುಂಟಾಯಿತು. ತಮಗೆ ಆಧ್ಯಾತ್ಮದತ್ತ ಒಲವು ಮೂಡಲು ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಮತ್ತು ಯುಸೂಫ್ ಖಾನ ಇವರೇ ಕಾರಣರೆನ್ನುತ್ತಾರೆ.

          ಪ್ರಾರಂಭದಿಂದಲೂ ಸುಪ್ತಾವಸ್ಥೆಯಲ್ಲಿದ್ದ ಶ್ರದ್ಧಾಭಕ್ತಿಗಳು ಇತ್ತೀಚೆಗೆ ಸಂಶೋಧನಾ ಕೃತಿಗಳಾಗಿ ಓದುಗರನ್ನು ಸೆಳೆದುಕೊಂಡಿವೆ. ಶ್ರೀ ಕಣ್ವಮಹರ್ಷಿಗಳ ನೆಲೆಗಳು, ಶ್ರೀ ಮಾಧವ ತೀರ್ಥರ ಪರಿಚಯ ಕೃತಿ, ಯೋಗೀಶ್ವರ ಯಾಜ್ಞವಲ್ಕ್ಯರ ನಿವಾಸ ಸ್ಥಾನ, ವಡನಗರ. ಯಾಜ್ಞವಲ್ಕ್ಯರು ಮತ್ತು ಅವರ ಪೂರ್ವಜರು ಮುಂತಾದ ಸಂಶೋಧನಾ ಕೃತಿಗಳು ಓದುಗರ ಕೈಸೇರಿವೆ.
         ಶ್ರೀಯುತರು ಸಂಘಟನಾ ಕಾರ್ಯಕರ್ತರಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ದೇವದುರ್ಗ ತಾಲೂಕಿನ ವೀರಘಟ್ಟ ಎಂಬಲ್ಲಿ ಶ್ರೀ ಮಾಧವತೀರ್ಥರ ತಪೋಭೂಮಿ ಅಭಿವೃದ್ಧಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 6 ಲಕ್ಷದ ಮೊತ್ತದ ಕಾರ್ಯವು ಪೂರ್ಣಗೊಂಡಿದೆ.

       ಸ್ಥಳೀಯ ಶ್ರೀ ವಿ.ಎಸ್. ಕಾಂತನವರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿಷ್ಠಾನದ ಕೇಂದ್ರವ್ಯಕ್ತಿ ಶ್ರೀ ವಿ.ಎಸ್. ಕಾಂತನವರ ಸಂಭಾವನಾ ಗ್ರಂಥದ ಪ್ರಕಾಶಕರಾಗಿದ್ದಾರೆ.
       
        ಬಿಹಾರ ರಾಜ್ಯದ ಮಿಥಿಲಾಂಚಲ ಪ್ರದೇಶದಲ್ಲಿರುವ ಮಧುಬನಿ ಜಿಲ್ಲೆಯ ಜಗವನವು ಶ್ರೀ ಯಾಜ್ಞವಲ್ಕ್ಯರ ಆಶ್ರಮ ಸ್ಥಾನವು ಅಲ್ಲಿ ಸುಮಾರು 1 ಲಕ್ಷ ರೂ.ಗಳ ಶ್ರೀ ಯಾಜ್ಞವಲ್ಕ್ಯರ ಸುಂದರ ಶಿಲಾಮೂರ್ತಿಯನ್ನು ಸ್ಥಾಪಿಸಲು ಸಂಕಲ್ಪಿಸಿದ್ದು ಅದು ಇಷ್ಟರಲ್ಲಿಯೇ ಸಾಕಾರಗೊಳ್ಳಲಿದೆ

        ಶ್ರೀ ಯಾಜ್ಞವಲ್ಕ್ಯರ ಜನ್ಮ ಭೂಮಿಯ ಗುಜರಾತ ರಾಜ್ಯದ ಮೆಹಸಾಣ ಜಿಲ್ಲೆಯ ವಡನಗರ ಎಂದು ಇವರು ಸಂಶೋಧಿಸಿ, ಗುಜರಾತ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಮೆಹಸಾಣ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅದನ್ನು ಮನವರಿಕೆ
ಮಾಡಿಕೊಟ್ಟು ಅಲ್ಲಿ ಮಹರ್ಷಿ ಯಾಜ್ಞವಲ್ಕ್ಯರ ಸ್ಮಾರಕ ನಿರ್ಮಾಣ ಮಾಡುವ ಮಾತು ಪಡೆದಿದ್ದಾರೆ.



ರಾಯಚೂರು
04-08-2014

1 comment:

  1. Sir, please post the photos of your JAGVAN/JAGBAN/YAGYAVALKYA STHANA visit.

    Also write an article on your research & visit (if possible then give either in Hindi or in English version too. Thanks with regards.

    ReplyDelete